ಕಲ್ಲ್ಯಾಣ್ಪುರ ಮಿಲಾಗ್ರಿಸ್ ಕಾಥೆಡ್ರಲ್ ಚರ್ಚಿನಲ್ಲಿ ದೀಪಾವಳಿ ಸಂಭ್ರಮ

ದೀಪಾವಳಿ — ಬೆಳಕಿನ ಸೌಹಾರ್ದ ಹಬ್ಬ

ಉಡುಪಿ: ಕಲ್ಲ್ಯಾಣ್ಪುರ ಮಿಲಾಗ್ರಿಸ್ ಕಾಥೆಡ್ರಲ್ ಚರ್ಚ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಹಿಂದೂ ಬಾಂದವರ ಮನೆಗಳಿಗೆ ಭೇಟಿ ನೀಡಿ ಶುಭಾಶಯ ಕೋರಿ, ಸಿಹಿ ತಿಂಡಿಗಳನ್ನು ಹಂಚಲಾಯಿತು.

ನೆರೆಯ ಅಂಗಡಿಗಳ ವ್ಯಾಪಾರಿಗಳಿಗೆ, ರಿಕ್ಷಾ ಚಾಲಕರಿಗೆ ಹಾಗೂ ಬಾಡಿಗೆ ವಸತಿಯಲ್ಲಿರುವ ಬಾಂದವರಿಗೆ ಸಹ ಸಿಹಿಯೊಡನೆ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.

ಸಂಧ್ಯಾಕಾಲದ ಬೆಳಕಿನ ಹಾಗೂ ದೀಪಗಳ ಹಬ್ಬವನ್ನು ಸಭಾಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಮತ್ತು ಭಾವಪೂರ್ಣವಾಗಿ ಆಚರಿಸಲಾಯಿತು.

ಕಾಥೆಡ್ರಲ್ ಧರ್ಮಗುರು ಮೊನ್ಸಿಞ್ಜೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,
“ನಾವು ನಮಗಾಗಿ ಬೆಳಕಾಗದೆ, ನಮಗಾಗಿ ಜೀವಿಸದೆ, ಪರರಿಗೋಸ್ಕರ ಬೆಳಕಾಗಿ ಉಜ್ವಲವಾಗಿ ಜೀವಿಸಬೇಕು. ಒಗ್ಗೂಡಿ ಬಾಳಬೇಕು ಹಾಗೂ ಸಾಮರಸ್ಯದಿಂದ ಬೆಳೆಯಬೇಕು,” ಎಂದು ಉಪದೇಶಿಸಿದರು.

ಕಾಥೆಡ್ರಲ್ ಸಹಾಯಕ ಗುರು ರೆವ್. ಫಾ. ಪ್ರದೀಪ್ ಕಾರ್ಡೋಜರವರು ಪ್ರಾಸ್ತಾವಿಕ ಸಂದೇಶದಲ್ಲಿ,
“ನಾವೆಲ್ಲರು ಅಂತರಂಗ ಹಾಗೂ ಬಹಿರಂಗ ಸಮಾನಾಂತರ ಜೀವನ ನಡೆಸಬೇಕು. ಉರಿಯುವ ದೀಪದಂತೆ, ಬೆಳಗುವ ತೂಗುದೀಪದಂತೆ, ಪ್ರಜ್ವಲಿಸುವ ಹಣತೆಯಂತೆ ನಮ್ಮ ಜೀವನವೂ ಬೆಳಗಬೇಕು. ಐಕ್ಯತೆಯ ಭಾವದಿಂದ ಜೀವಿಸೋಣ; ಭಗವಂತನ ಕೃಪೆ, ವರ ಹಾಗೂ ಸಮೃದ್ಧಿ ಎಲ್ಲರಿಗೂ ಲಭಿಸಲಿ,” ಎಂದು ಹೇಳಿದರು.

ಸ್ಥಳೀಯ ಪಂಚಾಯತ್ ಅಧ್ಯಕ್ಷ ಶ್ರೀ ನಾಗರಾಜ್ ಹಾಗೂ ಅಂಗಡಿ ಮಾಲಕರ ಸಂಘದ ಸಂಚಾಲಕ ಶ್ರೀ ವಿಜಯ್ ಸುವರ್ಣ ರವರು ಮಾತನಾಡಿ,
“ಕ್ರೈಸ್ತ ಹಾಗೂ ಹಿಂದೂ ಬಾಂದವರ ಬಾಂದವ್ಯ ಅಪ್ಪಟ ಪ್ರೀತಿಮಯ. ಬೇದಭಾವವಿಲ್ಲದೆ ಐಕ್ಯತಾ ಭಾವದಿಂದ ಹಬ್ಬವನ್ನು ಆಚರಿಸುತ್ತಿರುವುದು ಹರ್ಷದ ವಿಷಯ,” ಎಂದು ಹೇಳಿದರು.

ಹಬ್ಬದ ಪ್ರಯುಕ್ತ ಎಂಟು ಮಂದಿ ಸಮಾಜಸೇವಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸುಮಾರು 170 ಮಂದಿ ಕ್ರೈಸ್ತ, ಮುಸ್ಲಿಂ ಮತ್ತು ಹಿಂದೂ ಬಾಂದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪರಿಸರ ಸ್ನೇಹಿ ಪಟಾಕಿಗಳನ್ನು ಸಿಡಿಸಲಾಯಿತು.

ಚರ್ಚ್ ಕಥೋಲಿಕ್ ಸಭೆಯ ಅಧ್ಯಕ್ಷೆ ಶ್ರೀಮತಿ ಮಾರ್ಸೆಲಿನ್ ಶೇರಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೆಲ್ವಿನ್ ಸಿಕ್ವೇರ, ಕಾರ್ಯದರ್ಶಿ ಎವ್ಜಿನ್ ರೆಬೆಲ್ಲೊ, 20 ಆಯೋಗಗಳ ಸಂಯೋಜಕಿ ಪ್ರೇಮ ಲುವಿಸ್ ಹಾಗೂ ಆಯೋಗದ ಸಚೇತಕ್ ಜೆಫ್ರಿ ಡಯಾಸ್ ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *